Thumbnail for ಶಿರಹಟ್ಟಿ ಫಕೀರೇಶ್ವರ ಮಠ | ಗದಗ | Shirahatti  Fakireshwar Math | Gadag by Parichaya ಪರಿಚಯ

ಶಿರಹಟ್ಟಿ ಫಕೀರೇಶ್ವರ ಮಠ | ಗದಗ | Shirahatti Fakireshwar Math | Gadag

Parichaya ಪರಿಚಯ

7m 26s568 words~3 min read
YouTube auto captions
Transcript source

YouTube auto captions

This transcript was extracted from YouTube's auto-generated caption track. The transcript below is server-rendered so it can be read, searched, cited, and shared without opening the original YouTube player.

Pull quotes
[0:13]ಆತ್ಮೀಯರೇ ಯಾವುದೇ ಧರ್ಮವಿರಲಿ, ಸಂಪ್ರದಾಯವಿರಲಿ, ಅವೆಲ್ಲದರ ಅಂತಿಮ ಗುರಿ ಮಾನವ ಕಲ್ಯಾಣ ಮತ್ತು ಆತ್ಮ ಸಾಕ್ಷಾತ್ಕಾರವೇ ಆಗಿರುತ್ತದೆ.
[0:13]ಆದರೂ ಸಹ ಈ ಪರಮ ಸತ್ಯವನ್ನು ಅರಿಯದೆ ಹೆಚ್ಚಿನ ಮಂದಿ ಜಾತಿ ಧರ್ಮಗಳ ಮತಗಳ ಹೆಸರಿನಲ್ಲಿ ಹೋರಾಟಗಳನ್ನು ನಡೆಸುತ್ತಲೇ ಇರುತ್ತಾರೆ.
[0:13]ಆದರೆ ಗದಗ ಜಿಲ್ಲೆಯ ಫಕೀರೇಶ್ವರ ಮಠವು ಹಿಂದೂ ಮುಸ್ಲಿಂ ಸಾಮರಸ್ಯದ ಸಂಪ್ರದಾಯಕ್ಕೆ ಅಗ್ರಗಣ್ಯ ಹಾಗೂ ಅದ್ವಿತೀಯ ಉದಾಹರಣೆಯಾಗಿದೆ.
[0:13]ಸ್ಥಳ ಇತಿಹಾಸದ ಪ್ರಕಾರ ಫಕೀರೇಶ್ವರ ಮಠವನ್ನು 16ನೇ ಶತಮಾನದಲ್ಲಿ ಜಗದ ಗುರು ಫಕೀರೇಶ್ವರ ಸ್ವಾಮಿಗಳು ಸ್ಥಾಪನೆಯು ಮಾಡಿದ್ದಾರೆ.
Use this transcript
Related transcript hubs

[0:13]ವೀಕ್ಷಕರೇ ನಮಸ್ಕಾರ ತಮ್ಮ ಪರಿಚಯ ವಾಹಿನಿಗೆ ಸುಸ್ವಾಗತ. ಆತ್ಮೀಯರೇ ಯಾವುದೇ ಧರ್ಮವಿರಲಿ, ಸಂಪ್ರದಾಯವಿರಲಿ, ಅವೆಲ್ಲದರ ಅಂತಿಮ ಗುರಿ ಮಾನವ ಕಲ್ಯಾಣ ಮತ್ತು ಆತ್ಮ ಸಾಕ್ಷಾತ್ಕಾರವೇ ಆಗಿರುತ್ತದೆ. ಆದರೂ ಸಹ ಈ ಪರಮ ಸತ್ಯವನ್ನು ಅರಿಯದೆ ಹೆಚ್ಚಿನ ಮಂದಿ ಜಾತಿ ಧರ್ಮಗಳ ಮತಗಳ ಹೆಸರಿನಲ್ಲಿ ಹೋರಾಟಗಳನ್ನು ನಡೆಸುತ್ತಲೇ ಇರುತ್ತಾರೆ. ಆದರೆ ಗದಗ ಜಿಲ್ಲೆಯ ಫಕೀರೇಶ್ವರ ಮಠವು ಹಿಂದೂ ಮುಸ್ಲಿಂ ಸಾಮರಸ್ಯದ ಸಂಪ್ರದಾಯಕ್ಕೆ ಅಗ್ರಗಣ್ಯ ಹಾಗೂ ಅದ್ವಿತೀಯ ಉದಾಹರಣೆಯಾಗಿದೆ. ಸ್ಥಳ ಇತಿಹಾಸದ ಪ್ರಕಾರ ಫಕೀರೇಶ್ವರ ಮಠವನ್ನು 16ನೇ ಶತಮಾನದಲ್ಲಿ ಜಗದ ಗುರು ಫಕೀರೇಶ್ವರ ಸ್ವಾಮಿಗಳು ಸ್ಥಾಪನೆಯು ಮಾಡಿದ್ದಾರೆ. ನಾಲ್ಕು ಶತಮಾನಗಳ ಇತಿಹಾಸವನ್ನು ಹೊಂದಿರುವ ಶಿರಹಟ್ಟಿಯ ಫಕೀರೇಶ್ವರ ಮಠವು ವಿವಿದ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಂಡು ಬರುವುದರ ಜೊತೆಗೆ ಸಾಮಾಜಿಕ ಸೇವಾ ಕೈಂಕರ್ಯಗಳಲ್ಲೆಯೂ ಸಹ ತನ್ನನ್ನು ತಾನು ತೊಡಗಿಸಿಕೊಂಡಿದೆ. ನಮ್ಮ ಪ್ರಸ್ತುತ ಸಂಚಿಕೆಯಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯದ ಬೀಡಾಗಿರುವಂತಹ ಶಿರಹಟ್ಟಿಯ ಫಕೀರೇಶ್ವರ ಮಠದ ಕುರಿತು ಹಲವು ಕುತೂಹಲಭರಿತ ಮಾಹಿತಿಗಳನ್ನ ಒಂದೊಂದಾಗಿ ತಿಳಿದುಕೊಳ್ಳೋಣ. ವೀರಶೈವ ಕುಟುಂಬದಲ್ಲಿ ಫಕೀರೇಶ್ವರರು 16ನೇ ಶತಮಾನದಲ್ಲಿ ವಿಜಯಪುರದಲ್ಲಿ ಜನಿಸುತ್ತಾರೆ. ಇವರ ತಂದೆ ಶಿವಯ್ಯ ಹಾಗೂ ತಾಯಿ ಗೌರಮ್ಮನವರು. ಫಕೀರೇಶ್ವರರ ಪೂರ್ವನಾಮ ಚನ್ನವೀರ ಎಂದಾಗಿರುತ್ತದೆ. ಮಕ್ಕಳಿಲ್ಲದೆಯೇ ಪರಿತಪಿಸುತ್ತಿದ್ದಂತಹ ಶಿವಯ್ಯ ಹಾಗೂ ಗೌರಮ್ಮ ದಂಪತಿಗಳು ವಿಜಯಪುರದ ಪ್ರಸಿದ್ಧ ಮುಸ್ಲಿಂ ತತ್ವಜ್ಞಾನಿಗಳಾದ ಕಾಜಾ ಅಮಿನುದ್ದೀನ್ ಅವರನ್ನು ಭೇಟಿಯಾಗಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಆಗ ಕಾಜಾ ಅಮಿನುದ್ದೀನ್ ಅವರು ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳು ಜನಿಸುತ್ತಾರೆ ಎಂದು ಹರಸುತ್ತಾರೆ. ಆದರೆ ಜನಿಸಿದ ಮೊದಲ ಮಗುವನ್ನು ತಮಗೆ ನೀಡಬೇಕೆಂದು ಒಂದು ಶರತ್ತನ್ನು ವಿಧಿಸುತ್ತಾರೆ. ಕಾಜಾ ಅಮಿನುದ್ದೀನ್ ಅವರ ಭವಿಷ್ಯವಾಣಿಯಂತೆಯೇ ದಂಪತಿಗಳಿಗೆ ನಾಲ್ಕು ಜನ ಗಂಡು ಮಕ್ಕಳು ಜನಿಸುತ್ತಾರೆ. ಆದರೆ ಪುತ್ರ ವ್ಯಾಮೋಹದಿಂದ ದಂಪತಿಗಳು ಮೊದಲ ಮಗ ಚನ್ನವೀರರನ್ನು ಕಾಜಾ ಅಮಿನುದ್ದೀನ್ ಅವರಿಗೆ ನೀಡುವುದೇ ಇಲ್ಲ. ಹೀಗಿರುವಾಗ ಒಂದು ದಿನ ಹಿರಿಯ ಸುಪುತ್ರನಾದಂತಹ ಚನ್ನವೀರರಿಗೆ ಭಯಂಕರವಾದ ಜ್ವರ ಬಂದು ಸಾವು ಬದುಕಿನ ನಡುವೆ ಹೋರಾಟ ನಡೆಸಬೇಕಾಗುತ್ತದೆ. ಆ ಪರಿಸ್ಥಿತಿಯಲ್ಲಿ ದಂಪತಿಗಳಿಗೆ ಜ್ಞಾನೋದಯವಾಗಿ ಮಗು ಉಳಿದರೆ ಸಾಕು ಎಂದು ಚನ್ನವೀರರನ್ನು ಕಾಜಾ ಅಮಿನುದ್ದೀನ್ ಅವರಿಗೆ ಒಪ್ಪಿಸಿ ಬಿಡುತ್ತಾರೆ. ಕಾಜಾ ಅಮಿನುದ್ದೀನ್ ಅವರ ಕೃಪೆಯಿಂದ ಮಗು ಗುಣಮುಖವಾಗುತ್ತದೆ. ಹಿಂದೂ ಮುಸ್ಲಿಂ ಎರಡು ತತ್ವಗಳನ್ನು ಅರಗಿಸಿಕೊಂಡು ಬ್ರಹ್ಮಾನಂದರೆಂದು ಕರೆಸಿಕೊಳ್ಳುತ್ತಿದ್ದಂತಹ ಕಾಜಾರಿಂದ ಚನ್ನವೀರರು ಆಧ್ಯಾತ್ಮ ಹಾಗೂ ತತ್ವಜ್ಞಾನಗಳನ್ನು ಕಲಿಯುತ್ತಾರೆ. ಕಾಜಾ ಅಮಿನುದ್ದೀನ್ ಅವರು ಚನ್ನವೀರರಿಗೆ ದೀಕ್ಷೆಯನ್ನು ನೀಡಿ ಫಕೀರೇಶ್ವರ ಎಂದು ನಾಮಕರಣವನ್ನು ಮಾಡುತ್ತಾರೆ. ಫಕೀರೇಶ್ವರರು ಶೈವರಂತೆ ಹಣೆಯಲ್ಲಿ ವಿಭೂತಿ, ಸಾದಕರಂತೆ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಯೋಗಿಗಳಂತೆ ಕಾಲಲ್ಲಿ ಪಾದುಕೆಗಳನ್ನು ತೊಡುತ್ತಲಿದ್ದರು. ಹಿಂದೂ ಬಾಂಧವರೆಲ್ಲರೂ ಶಿವರೆಂದು ಮುಸ್ಲಿಮರೆಲ್ಲರೂ ಪೈಗಂಬರ್ ಎಂದು ಇವರನ್ನು ಕರೆಯುತ್ತಲಿದ್ದರು. ದ್ವೇಷ ಬಿಡು ಪ್ರೀತಿ ಮಾಡು ಎಂಬ ನಾಮಾಂಕಿತದಿಂದ ಸಂದೇಶವನ್ನು ಜಗತ್ತಿಗೆ ಸಾರಿದಂತಹ ಫಕೀರೇಶ್ವರರು ಭಕ್ತಾದಿಗಳಿಗೆ ಈಶ್ವರನ ಸಾಕ್ಷಾತ್ಕಾರಕ್ಕೆ ಮಾರ್ಗವನ್ನು ತೋರಿಸಿದ್ದರು. ತಮ್ಮ ಗುರುಗಳ ಆದೇಶದಂತೆ ಲೋಕ ಸಂಚಾರವನ್ನು ಪ್ರಾರಂಭಿಸಿದಂತಹ ಫಕೀರೇಶ್ವರರು ಹಿಂದೂ ಮುಸ್ಲಿಂ ಧರ್ಮೀಯರಿಗೆ ಸಹಬಾಳ್ವೆಯ ಕಂಕಣವನ್ನು ಕಟ್ಟಿ ದ್ವೇಷವನ್ನು ಬಿಟ್ಟು ಪ್ರೀತಿಯ ಜೀವನವನ್ನು ಮಾಡುವ ಸಂದೇಶವನ್ನು ತಿಳಿಸುತ್ತಾ ನಡೆಯುತ್ತಾರೆ. ದೆಹಲಿಗೂ ತೆರಳಿ ಮೊಗಲ್ ಚಕ್ರವರ್ತಿಯಾದಂತಹ ಅಕ್ಬರನ ಆಸ್ಥಾನದಲ್ಲಿ ಸತ್ತು ಹೋಗಿದ್ದಂತಹ ಪಟ್ಟದ ಆನೆಯನ್ನು ಬದುಕಿಸುತ್ತಾರೆ. ಅಕ್ಬರನು ಸಂತೋಷದಿಂದ ಈ ಸಂತರರಿಗೆ ರಾಜಮುದ್ರೆಯನ್ನು ನೀಡಿ ಗೌರವಿಸುತ್ತಾನೆ. ಅನಂತರ ದೆಹಲಿಯಿಂದ ಫಕೀರೇಶ್ವರರು ಗದಗ ಜಿಲ್ಲೆಯ ಶಿರಹಟ್ಟಿಗೆ ಆಗಮಿಸಿ ಅಲ್ಲೇ ಜೀವಂತ ಸಮಾಧಿ ಹೊಂದುತ್ತಾರೆ. ಅವರ ಗದ್ದುಗೆಯ ಮೇಲೆ ಕಟ್ಟಿದ ಮಠವು ಪ್ರಸ್ತುತ ಫಕೀರೇಶ್ವರ ಮಠವಾಗಿ ನಮ್ಮ ನಾಡಿನಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಮಠವನ್ನು ಹಿಂದೂ ಇಸ್ಲಾಮಿಕ್ ಎರಡು ಶೈಲಿಯಲ್ಲಿ ಕಟ್ಟುವ ಮೂಲಕ ಸಾಮರಸ್ಯವನ್ನು ಬಿಂಬಿಸಲಾಗಿದೆ.

[4:41]ಫಕೀರೇಶ್ವರರ ಗದ್ದುಗೆಯೂ ಹಿಂದೂ ಮುಸ್ಲಿಂ ಕಲೆಯನ್ನು ಹೊಂದಿದೆ. ಗದ್ದುಗೆಯ ಮೇಲೆ ತಾಮ್ರದ ಫಕೀರೇಶ್ವರರ ಪುತ್ಥಳಿಯಿದೆ. ಅವರ ತಲೆಯ ಮೇಲೆ ಹೆಡೆ ಎತ್ತಿರುವಂತಹ ಸರ್ಪವಿದೆ. ಹಿಂದೂ ಮುಸ್ಲಿಂ ಇಬ್ಬರು ಭಕ್ತಾದಿಗಳು ಇಲ್ಲಿಗೆ ಆಗಮಿಸಿ ತಮ್ಮ ಪೂಜಾ ವಿಧಿ ವಿಧಾನಗಳೊಂದಿಗೆ ಫಕೀರೇಶ್ವರರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಭಕ್ತರ ಆಶೋತ್ತರಗಳನ್ನು ಈಡೇರಿಸುವ ಶಕ್ತಿ ಶಿರಹಟ್ಟಿ ಫಕೀರೇಶ್ವರರ ಗದ್ದುಗೆಗೆ ಇದೆ. ಈ ಕ್ಷೇತ್ರದಲ್ಲಿ ಈ ಪ್ರಸ್ತುತ ಕಲಿಯುಗದಲ್ಲಿಯೂ ಸಹ ಅನೇಕ ಪವಾಡಗಳು ಜರುಗುವುದನ್ನು ಭಕ್ತಾದಿಗಳು ಸಾಕ್ಷೀಕರಿಸಿದ್ದಾರೆ. ಮಠದ ಮುಂಭಾಗದಲ್ಲಿರುವ ನಗಾರಿಕಾನೆಯಲ್ಲಿ 200 ರಿಂದ 300 ವರ್ಷ ಪುರಾತನವಾದಂತಹ ನಗಾರಿ ಹಾಗೂ ಡೋಳು ಇದೆ. ನಗಾರಿಕಾನೆಯಲ್ಲಿ ಪಂಚವಾದ್ಯಗಳ ಸೇವೆ ದಿನಕ್ಕೆ ಎರಡು ಬಾರಿ ನಡೆಯುತ್ತದೆ. ಈ ವಾದ್ಯಗಳ ನಾದವನ್ನು ಕೇಳಿದರೆ ಭೂತಪಿಷ್ಟಗಳಿಂದ ಬಳಲುತ್ತಿರುವವರ ಸಮಸ್ಯೆಗಳೆಲ್ಲ ನಿವಾರಣೆಯಾಗುತ್ತವೆ. ಪ್ರತಿ ವರ್ಷವೂ ಉರುಸ್ ಆಚರಣೆಯ ವೇಳೆ ಜಾತಿ, ಮತ, ಧರ್ಮ, ಪಂಥಗಳ ಭೇದವಿಲ್ಲದೆಯೇ ಸರ್ವಧರ್ಮೀಯರು ಬಂದು ಫಕೀರೇಶ್ವರರ ಗದ್ದುಗೆಗೆ ಸಕ್ಕರೆಯನ್ನು ಅರ್ಪಿಸುತ್ತಾರೆ. ಇಲ್ಲಿ ಭಕ್ತಾದಿಗಳು ತಮ್ಮ ಬೇಡಿಕೆ ಈಡೇರಿದ ನಂತರ ಮತ್ತೆ ಆಗಮಿಸಿ ಸಕ್ಕರೆಯನ್ನು ಅರ್ಪಿಸಿ ಹರಕೆ ತೀರಿಸುವಂತಹ ವಿಧಾನವಿದೆ. ಸಮಾಧಿ ಹೊಂದುವುದಕ್ಕೂ ಮೊದಲು ಫಕೀರೇಶ್ವರರು ತಮ್ಮ ಭಕ್ತಾದಿಗಳ ಬೇಡಿಕೆ ಈಡೇರಿಕೆಗೆ ಹಾಗೂ ಧರ್ಮ ರಕ್ಷಣೆಗೆ ತಾನು ಸರ್ಪದ ಮೂಲಕ ದರ್ಶನವನ್ನು ನೀಡುತ್ತೇನೆ ಎಂದು ಸೂಚಿಸಿದ್ದರಂತೆ. ಈಗಲೂ ಪ್ರತಿವರ್ಷ ಮೇ ತಿಂಗಳಿನಲ್ಲಿ ನಡೆಯುವಂತಹ ಜಾತ್ರಾ ಸಮಯದಲ್ಲಿ ಕೆಲ ಪುಣ್ಯಪುರುಷರಿಗೆ ಫಕೀರೇಶ್ವರರು ಸರ್ಪದ ರೂಪದಲ್ಲಿ ಗೋಚರಿಸುತ್ತಾರಂತೆ. ಐದು ಶತಮಾನಗಳ ಇತಿಹಾಸ ಹೊಂದಿರುವ ಶಿರಹಟ್ಟಿ ಸಂಸ್ಥಾನ ಮಠದ ಪರಂಪರೆಯಲ್ಲಿ ಇಲ್ಲಿಯವರೆಗೂ 12 ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಹೆಚ್ಚಿನ ಮಠಗಳಿಗೆ ಇರುವಂತೆ ಶಿರಹಟ್ಟಿ ಮಠಕ್ಕೂ ಸಹ 50ಕ್ಕೂ ಹೆಚ್ಚು ಶಾಖಾ ಮಠಗಳಿವೆ. ಮಠವು ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ದಾನಿಗಳು ಕೊಟ್ಟಿರುವಂತಹ ನೂರಾರು ಎಕರೆ ಹೊಲದಲ್ಲಿ ಜೋಳ, ಗೋಧಿ, ಕಡಲೆ, ಶೇಂಗಾ, ತೊಗರಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದು ನಿತ್ಯವೂ ಅನ್ನದಾಸೋಹ ನಡೆಸಲಾಗುತ್ತದೆ. ವೀಕ್ಷಕರೇ ತಾವೇನಾದರೂ ನಮ್ಮ ಕರ್ನಾಟಕದ ಗದಗಕ್ಕೆ ಭೇಟಿ ನೀಡುವವರಿದ್ದರೆ ಕೋಮು ಸೌಹಾರ್ದಕ್ಕೆ ಹೆಸರುವಾಸಿಯಾಗಿರುವ ಶಿರಹಟ್ಟಿಯ ಫಕೀರೇಶ್ವರರ ಮಠಕ್ಕೂ ಸಹ ಭೇಟಿಯನ್ನು ನೀಡಿ ಎಂದು ಸಲಹೆಯನ್ನು ನೀಡುತ್ತಾ ಆ ಭಗವಂತನ ಕೃಪಾ ಕಟಾಕ್ಷ ಸದಾಕಾಲ ನಮ್ಮೆಲ್ಲರ ಮೇಲೆ ಇರಲಿ ಎಂದು ಕೋರಿಕೊಳ್ಳುತ್ತಾ ಈ ಕಿರು ಪರಿಚಯವನ್ನು ಮುಗಿಸುತ್ತಲಿದ್ದೇವೆ. ವೀಕ್ಷಕರೇ ನಿಮಗೆ ಈ ವಿಡಿಯೋ ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್ಸ್ಕ್ರೈಬ್ ಮಾಡಿ ಹಾಗೂ ಬೆಲ್ ಬಟನ್ ಒತ್ತುವುದನ್ನು ಮರೆಯಬೇಡಿ.

Need another transcript?

Paste any YouTube URL to get a clean transcript in seconds.

Get a Transcript